ಫೋರ್ಡ್, ಹೆನ್ರಿ
1863-1947. ಅಮೆರಿಕದ ಉದ್ಯಮಪತಿ. 19ನೆಯ ಶತಮಾನದ ಕೊನೆಯಲ್ಲಿ ಜಾಗತಿಕ ಕೈಗಾರಿಕಾ ಬೆಳವಣೆಗೆ ರೈಲು ರಸ್ತೆ ಮತ್ತು ಕಬ್ಬಿಣದ ಮೇಲೆ ಕೇಂದ್ರಿಕೃತವಾಗಿತ್ತು. 1920ರ ಹೊತ್ತಿಗೆ ಜನರಿಗೆ ಉಪಯುಕ್ತವಾದ ಮತ್ತು ಬಳಕೆಗೆ ಬೇಕಾಗುವ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳಿಂದ ಈ ಬೆಳವಣೆಗೆ ಪ್ರಭಾವಗೊಂಡಿತು. ಇವುಗಳಲ್ಲಿ ಬಹಳ ಮುಖ್ಯವಾದದ್ದು ಸ್ವಚಾಲಿತ ವಾಹನಗಳ ತಯಾರಿಕೆ. ಈ ದಿಶೆಯಲ್ಲಿ ಮುಂದಾಳುತನ ಪ್ರದರ್ಶಿಸಿ ಪ್ರಪಂಚದ ಮುಖವನ್ನೇ ಬದಲಾಯಿಸಲು ಕಾರಣನಾದವ ಹೆನ್ರಿ ಫೋರ್ಡ್. 

	ವ್ಯಕ್ತಿಗಳನ್ನೂ ಸಾಮಗ್ರಿಗಳನ್ನೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದೇ ಸಾಗಣೆ. ಸ್ವಚಾಲಿತ ವಾಹನ ಅಂದರೆ ಬಸ್ಸು ಲಾರಿ ಕಾರು ಮುಂತಾದವನ್ನು ಸಾಗಣೆಗೆ ಬಳಸಿ ಸಾಗಣೆಯೇ ನಾಗರಿಕತೆ ಎಂಬುದನ್ನು ಸಿದ್ಧಾಂತಮಾಡಿ ಸಾರಿದಾತ ಹೆನ್ರಿ ಫೋರ್ಡ್. ಇದು ಇಂದಿಗೂ ನಿಜ. ಯಾವ ದೇಶದಲ್ಲಿ ಸಾಗಣೆ ಸೌಕರ್ಯ ಚೆನ್ನಾಗಿರುವುದೋ ಅದು ನಾಗರಿಕತೆಯ ಮಾನಕದಲ್ಲಿ ಮುಂದುವರಿದ ದೇಶ. ಸ್ವಚಾಲಿತ ವಾಹನಗಳನ್ನು ಮಾನವ ಸೇವಕರನ್ನಾಗಿ ಮಾಡಿ ಅವು ಅಗ್ಗವಾಗಿ ದೊರೆಯುವಂತೆ ಈ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವ ಹೆನ್ರಿಫೋರ್ಡ್. 

	1863 ಜುಲೈ 30ರಂದು ಮಿಚಿಗನ್ನಿನ ಡಿಯರ್‍ಬಾರ್ನಿನಲ್ಲಿ ತಂದೆಯ ಜಮೀನಿನ ಹತ್ತಿರ ಹೆನ್ರಿ ಜನಿಸಿದ. ತಂದೆ ವಿಲಿಯಮ್ ಫೋರ್ಡ್. ಹೆನ್ರಿಗೆ ಜಮೀನಿನಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ. ಇವನಿಗಾಗ ವಯಸ್ಸು ಹನ್ನೆರಡು. ಆವಿಯ ಟ್ರ್ಯಾಕ್ಟರೊಂದು ಸ್ವಯಂಚಾಲಿತವಾಗಿ ರಸ್ತೆಯಲ್ಲಿ ಸಾಗುತ್ತಿದ್ದುದನ್ನು ಗಮನಿಸಿದ. ಈ ದೃಶ್ಯ ಇವನಲ್ಲಿ ಹೊಸ ಚಿಂತನೆಗಳಿಗೆ ಪ್ರೇರಣೆ ನೀಡಿತು. ವರ್ಷ ಹದಿನೈದು. ಹೆನ್ರಿ ಶಾಲೆ ಬಿಟ್ಟ. ಮಿಷನ್ ಷಾಪಿನಲ್ಲಿ ಅಭ್ಯಾಸಿಯಾಗಿ ಸೇರಿದ. ಹಾಗೆಯೇ ರಾತ್ರಿ ವೇಳೆ ಗಡಿಯಾರ ದುರಸ್ತಿ ಮಾಡತೊಡಗಿದ. ಹೊಲದಲ್ಲಿ ಕೆಲಸ ಮಾಡುವಷ್ಟು ಶಕ್ತಿಯುಳ್ಳ ಆವಿಯ ಟ್ರ್ಯಾಕ್ಟರ್ ವಿಚಾರದಲ್ಲಿ ಮುಂದಿನ ಎರಡುವರ್ಷ ಶೋಧನೆ ಮಾಡಿದ. ಶಕ್ತಿಯುತವಾದ ಟ್ರ್ಯಾಕ್ಟರ್ ಆಗಿರಬೇಕು ಹಾಗೂ ಚಿಕ್ಕದಾಗಿ ಹಗುರಾಗಿದ್ದು ಒಬ್ಬ ರೈತ ಕೊಂಡುಕೊಳ್ಳುವಂತೆ ಇರಬೇಕು ಎಂಬುದೇ ಆತನ ಬಯಕೆ. ಕಡೆಗೆ ಆವಿ ಶಕ್ತಿಯ ಉಪಯೋಗ ಬಿಡಬೇಕಾಯಿತು. ಕಾರಣ ಯೋಜನೆಗೆ ತಕ್ಕಂತೆ ಇದನ್ನು ಕಾರ್ಯರೂಪಕ್ಕೆ ತರುವುದು ಕೈಗೂಡಲಿಲ್ಲ. ಇದಕ್ಕಾಗಿ ಒಂದು ಉರುಳೆಯ ಚತುರ್ಘಾತೀಯ ಅಂತರ್ದಹನ ಎಂಜಿನ್ನನ್ನು ತಯಾರಿಸಿದ. ತನ್ನ ಅಡುಗೆ ಮನೆಯಲ್ಲಿಯೇ ಎರಡು ಉರಳೆಯ ಮೊದಲ ಎಂಜಿನ್ ಕಟ್ಟಿದ (1893). 

	ಆಗಿನ ಕಾಲದ ಬೆನ್ಝ್ ಮಾದರಿಯನ್ನು ಖುದ್ದು ನೋಡಲೆಂದು ಹೆನ್ರಿ ನ್ಯೂಯಾರ್ಕಿಗೆ ಪಯಣಿಸಿದ. ಅದರಲ್ಲಿ ಪ್ಲಾನಿಟರಿಗಿಯರ್ ಪೆಟ್ಟಿಗೆ ಮತ್ತು ಪಟ್ಟಿ ಚಾಲನೆ (ಬೆಲ್ಟ್ ಡ್ರೈವ್) ಇದ್ದುವು. ಗಿಯರನ್ನು ಮುಂದೆ ತಳ್ಳಲು ಮತ್ತು ತಟಸ್ಥ ವೇಗ ಪಡೆಯಲು ಈ ಪಟ್ಟಿಯನ್ನು ಉಪಯೋಗಿಸಬಹುದಾಗಿತ್ತು. ಆದರೆ ಹಿಂತಿರುಗಿಸುವ ಏರ್ಪಾಡು ಇರಲಿಲ್ಲ. ಫೋರ್ಡ್ ವಾಹನವನ್ನು ಕಟ್ಟುವಾಗ ಹೊಸದಾಗಿ ಉಪಜ್ಞಿಸಿದ್ದೆಂದರೆ ಕಾಂಪನ್ಸೇಟಿಂಗ್ ಗಿಯರ್ (ಡಿಫರೆನ್ಷಿಯಲ್). ಡೆಟ್ರಾಯಿಟ್ ಊರಿನಲ್ಲಿ ಇದೊಂದೇ ಕಾರಿಗೆ ಸೌಕರ್ಯವಿದ್ದದ್ದು. ಮೂರು ವರ್ಷಗಳ ಬಳಿಕ ಸ್ವಂತ ತೋಟದಲ್ಲಿಯ ಕಾರ್ಯಾಗಾರದಲ್ಲಿ ಮತ್ತೊಂದು ಕಾರು ಕಟ್ಟಿದ. ಅದು ಗಂಟೆಗೆ 40 ಕಿ.ಮೀ. ವೇಗದಲ್ಲಿ ಹೋಗಬಲ್ಲ ಮೊದಲನೆಯ ಕಾರು (1896). 1899ರಲ್ಲಿ ಡಿಟ್ರಾಯಿಟ್ ಆಟೊಮೊಬೈಲ್ ಕಂಪನಿಯನ್ನೂ 1903ರಲ್ಲಿ ಫೋರ್ಡ್ ಮೋಟರ್ ಕಂಪನಿಯನ್ನೂ ಸ್ಥಾಪಿಸಿದ. 

	1903ರಲ್ಲಿ ಹೆನ್ರಿ ಇನ್ನೆರಡು ಕಾರುಗಳನ್ನು ಕಟ್ಟಿದ. 40 ಅಶ್ವಸಾಮಥ್ರ್ಯದ ನಾಲ್ಕು ಉರುಳೆ ಎಂಜಿನ್ನಿರುವ ಎರಡು ಕಾರುಗಳನ್ನು ಕಟ್ಟಿ ಪಂದ್ಯಕ್ಕಾಗಿ ಕಳಿಸಿದ. ಇದರಿಂದ ಆತನಿಗೆ ಪ್ರಚಾರವೂ ಸಿಕ್ಕಿತು. ಫೋರ್ಡ್ ಮೋಟರ್ ಕಂಪನಿಯನ್ನು ಪ್ರಾರಂಭಿಸಲು ಒಳ್ಳೆಯ ಬೆಂಬಲವೂ ಸಿಕ್ಕಿತು. ತಯಾರಿಕಾ ವಿಧಾನದಲ್ಲಿ ಪ್ರಯೋಗ ನಡೆಸಿ ಕೆಲವು ವರ್ಷಗಳಲ್ಲಿ ವಿಧ ವಿಧವಾದ ಮಾದರಿಯ ಮೂರು ಕಾರುಗಳನ್ನು ತಯಾರಿಸಿ ಒಳ್ಳೆಯ ಅನುಭವ ಪಡೆದು ತಾನು ಹಂಚಿಕೆ ಹಾಕಿದ ಮಾದರಿಯ ಕಾರನ್ನು ತಯಾರಿಸಲು ಜ್ಞಾನಪಡೆದ. ಅವನ ಕನಸಿನ ಕಾರೆಂದರೆ ಅತಿ ಸುಲಭ ಬೆಲೆಗೆ ವಿಶ್ವಾಸಾರ್ಹವಾದ ಮತ್ತು ಯಾರು ಬೇಕಾದರೂ ಓಡಿಸಬಹುದಾದ ಸ್ವಚಾಲಿತ ವಾಹನ. ಕಮ್ಮಿ ಬೆಲೆಯದಾದರೆ ಹೆಚ್ಚುಜನ ಕೊಂಡುಕೊಳ್ಳುವರು ಎಂಬುದನ್ನು ಸಿದ್ಧಾಂತಪಡಿಸಿದ. ವೆನಡಿಯಮ್ ಉಕ್ಕನ್ನು ಉಪಜ್ಞಿಸಿದ. ಇದರ ಕರ್ಷಣ ತ್ರಾಣ (ಟೆನ್ಸೈಲ್ ಸ್ಟ್ರೆಂತ್) ಸಾಧಾರಣ ಉಕ್ಕಿನ ತ್ರಾಣದ ಎರಡರಷ್ಟು ಇತ್ತು. ಇದರ ಉಪಯೋಗದಿಂದ ವಾಹನವನ್ನು ಹಗುರ ಮಾಡುವುದು ಸಾಧ್ಯವಾಯಿತು. ತನಗೆ ಬೇಕಾದಷ್ಟು ಸಾಮಾನುಗಳನ್ನು ಒಟ್ಟಿಗೆ ಕೊಂಡು ಶೇಖರಿಸಿದ. ಅಲ್ಲದೆ ದಾಸ್ತಾನುಗಳ ಮೇಲೆ ಕಂಪನಿಯ ಹತೋಟಿ ಕೂಡ ಇಟ್ಟುಕೊಂಡ.

	ಪ್ರಪಂಚದಲ್ಲೇ ಸುಪ್ರಸಿದ್ಧವಾದ ಟಿನ್ ಟಿಜಲ್ ಮಾಡಲ್ ಟಿ ಫೋರ್ಡ್ ಕಾರನ್ನು 1908ರಲ್ಲಿ ಕಟ್ಟಿದ. ಅದೇ ವರ್ಷ ಜೂನ್ ತಿಂಗಳಲ್ಲಿ 100 ಕಾರುಗಳನ್ನು ಒಂದೇದಿನದಲ್ಲಿ ತಯಾರಿಸಿದ. ಮೊತ್ತಮೊದಲಾಗಿ ಕಡಿಮೆ ಬೆಲೆಯ ಹಗುರ, ವೇಗ ಮತ್ತು ವಿಶ್ವಾಸಾರ್ಹ ಕಾರುಗಳನ್ನು ತಯಾರಿಸುವುದೇ ಆತನ ಗುರಿ. ಕಾರಿನ ಭಾಗಗಳ ಶಿಷ್ಷೀಕರಣ ಕ್ರಮಾಗತ ಜೋಡಣೆ ಶೀಘ್ರ ಉತ್ಪಾದನೆ, ಕೆಲಸಗಾರರಿಗೆ ಹೆಚ್ಚು ವೇತನ ಮತ್ತು ಪ್ರಗತಿಪರ ಮಾರಾಟವಿಧಾನಗಳು ಇವು ಫೋರ್ಡ್ ಅನುಸರಿಸಿದ ತಂತ್ರ. ಕಚ್ಚಾಸಾಮಾನುಗಳ ಉಪಯೋಗವನ್ನು ಹತೋಟಿಯಲ್ಲಿಟ್ಟುಕೊಂಡು ಸರಿಸಮಾನವಾದ ವಿತರಣೆ ಮಾಡಿ ಉತ್ಪಾದನಾ ಖರ್ಚು ಕಡಿಮೆ ಮಾಡಿದ. ಸಾಗುಪಟ್ಟಿ ರವಾನೆ ಪದ್ಧತಿ ಮತ್ತು ಜೋಡಣೆ ಸಾಲು ವ್ಯವಸ್ಥೆಗಳನ್ನು ಕಾರಿನ ಉತ್ಪಾದನೆಯಲ್ಲಿ ತಂದ. ಇದರಿಂದ ಹೆಚ್ಚು ಖರ್ಚಿಲ್ಲದೆ ಉತ್ತಮ ಗುಣಮಟ್ಟದ ಕಾರುಗಳ ತಯಾರಿಕೆ ಸುಲಭವಾಗಿ ಹೆನ್ರಿ ಫೋರ್ಡ್ ತನ್ನ ಎಲ್ಲ ಸ್ಪರ್ಧಿಗಳನ್ನೂ ಮೀರಿಸಿ ಪ್ರಪಂಚದಲ್ಲೇ ಅತಿ ದೊಡ್ಡದಾದ ಸ್ವಚಾಲಕ ವಾಹನ ತಯಾರಿಕೆಗಾರನಾದ. ಆಗಿನ ಕಾಲಕ್ಕೆ ಭೂರಿ ಉತ್ಪಾದನೆಯ ಸೃಷ್ಟಿಕರ್ತನಾದ.

	ಟಿ ಮಾದರಿಯ ಕಾರಿನಲ್ಲಿ ನಾಲ್ಕು ಜೋಡಣೆಗಳು ಮಾತ್ರ ಇದ್ದುವು. ಅಂದರೆ ಸಾಮಥ್ರ್ಯ ಯಂತ್ರೋಪಕರಣಗಳು, ಚೌಕಟ್ಟು, ಮುಂದಿನ ಅಚ್ಚು, ಹಿಂದಿನ ಅಚ್ಚು ನಾಲ್ಕು ಬೇರೆ ಬೇರೆ ಆಕಾರದಲ್ಲಿ ದೊರೆಯುತ್ತಿದ್ದುವು. ಬಲು ಕಡಿಮೆ ಬೆಲೆ ಎಂದರೆ 825 ಡಾಲರ್. ಮೊದಲನೆಯ ವರ್ಷವೇ 10,607 ಕಾರುಗಳು ತಯಾರಿಸಲ್ಪಟ್ಟವು. ಒಂದೂವರೆಕೋಟಿಗೂ ಹೆಚ್ಚು ಟಿ ಮಾದರಿಯ ಕಾರುಗಳು 1927ರಲ್ಲಿ ಮಾರಾಟವಾದುವು. ಫೋರ್ಡ ಮೋಟರ್ ಕಂಪನಿ ಒಂದು ಲಕ್ಷ ಡಾಲರ್ ಬಂಡವಾಳದಿಂದ ಪ್ರಾರಂಭವಾಗಿ 1927ರಲ್ಲಿ ಕೊನೆಯ ಕಾರು ಮಾರುವ ಹೊತ್ತಿಗೆ 70 ಕೋಟಿ ಡಾಲರುಗಳು ಇದರ ಮೀಸಲು (ರಿಸರ್ವ್) ಬಂಡವಾಳವಾಗಿತ್ತು. 
	ಕಡಿಮೆ ಲಾಭ, ಹೆಚ್ಚು ಮಾರಾಟ ಫೋರ್ಡನ ಧ್ಯೇಯ. ಅಂದರೆ, ಕಾರು ಮಾರಾಟದಿಂದ ಆತನಿಗೆ ಸಿಗುತ್ತಿದ್ದುದು ಕಡಿಮೆ ಲಾಭ. ಕಡಿಮೆ ಬೆಲೆ ಇಟ್ಟದ್ದರಿಂದ ಹೆಚ್ಚು ಕಾರುಗಳು ಮಾರಾಟವಾಗುತ್ತಿದ್ದುವು. ಹೆಚ್ಚು ಮೊತ್ತದಲ್ಲಿ ಹಣ ಲಾಭವಾಗುತ್ತಿತ್ತು. ಭೂರಿ ಉತ್ಪಾದನೆಯ ಮೊದಲಿಗೆ ಹೆನ್ರಿ ಫೋರ್ಡ್. ಜೋಡಣೆಯ ಸಾಮಾನುಗಳನ್ನು ಕೆಲಸಗಾರರ ಹತ್ತಿರಕ್ಕೆ ತರುವ ಪಟ್ಟಿಗಳ ಪದ್ಧತಿ ಪ್ರಾರಂಭಿಸಿದ. ಇಲ್ಲದಿದ್ದರೆ, ಕೆಲಸಗಾರರೇ ಸಾಮಾನುಗಳು ಇರುವ ಕಡೆಗೆ ಹುಡುಕಿಕೊಂಡು ಹೋಗಿ ವೇಳೆ ಹಾಳುಮಾಡುವುದು ಪದ್ಧತಿ. ಇದು ತಪ್ಪಿತು, ಈ ಪದ್ಧತಿಯಿಂದ ಉಳಿತಾಯ ಹೆಚ್ಚಾಯಿತು. ಕೆಲಸಗಾರಿಗೆ ಹೆಚ್ಚು ವೇತನ ಕೊಟ್ಟು ಲಾಭದ ಹೆಚ್ಚು ಭಾಗವನ್ನು ಹೊಸ ಕಾರ್ಖಾನೆ ಕಟ್ಟಲು ಮತ್ತು ಕಬ್ಬಿಣ ಹಾಗೂ ಕಲ್ಲಿದ್ದಲ ಗಣಿ ಕೊಳ್ಳಲು ಉಪಯೋಗಿಸಿದ.

	ಕೆಲಸಗಾರರಲ್ಲಿ ಲಾಭದ ಹಂಚಿಕೆಯ ಹೊಸಯೋಜನೆ ತಂದು 10 ಮಿಲಿಯನ್ ಡಾಲರುಗಳನ್ನು ಅವರಿಗೆ ಬೋನಸ್ಸಾಗಿ ಕೊಟ್ಟು ಅಮೆರಿಕ ದೇಶವನ್ನೇ ಅಲ್ಲಾಡಿಸಿದ. ಕೆಲಸಗಾರರಿಗೆ, 2.34 ಡಾಲರಿನಿಂದ 5 ಡಾಲರ್ ಸಂಬಳ ಕೊಟ್ಟ. ಕೆಲಸದ ವೇಳೆಯನ್ನು ದಿನಕ್ಕೆ 9 ಗಂಟೆಯಿಂದ 8 ಗಂಟೆಗೆ ಇಳಿಸಿದ. 9 ಗಂಟೆಗಳ ಎರಡು ಕೆಲಸಗಾರರ ಗುಂಪು ದಿನಕ್ಕೆ ಕೆಲಸ ಮಾಡುವ ಬದಲು 8 ಗಂಟೆಯ ಮೂರು ಗುಂಪು ಒಂದು ದಿನ ಕೆಲಸ ಮಾಡುವ ಹಾಗೆ ಆಯಿತು. ಇದರಿಂದ ಉತ್ಪಾದನೆಯ ವೇಳೆ ಹೆಚ್ಚಾಯಿತು. ಆದರೂ ಆದಿತ್ಯವಾರ ಮಾತ್ರ ಕೆಲಸ ಮಾಡಿಸುತ್ತಿರಲಿಲ್ಲ.

	ಐರೋಪ್ಯ ದೇಶದಲ್ಲಿ ಅತಿ ದೊಡ್ಡದಾದ ಫೋರ್ಡ್ ಕಂಪನಿಗೆ ಸೇರಿದ ಕಾರ್ಖಾನೆ ಥೇಮ್ಸ್ ನದಿಯ ಪಕ್ಕದಲ್ಲಿ ಡೆಗನ್‍ಹ್ಯಾಮ್‍ನಲ್ಲಿದೆ. 1927ರಲ್ಲಿ ಟಿ ಮಾದರಿಯ ಕಾರು ಸಾಕಷ್ಟು ದಿನ ಬಾಳಿದೆ, ಇನ್ನು ಅದರ ಕಾಲ ಮುಗಿಯಿತು ಎಂದು ಕಾರ್ಖಾನೆಗಳಲ್ಲಿ ಯಂತ್ರ ಸಲಕರಣೆಗಳನ್ನು ಬದಲಾವಣೆ ಮಾಡಿ ಎ ಮಾದರಿ ಎಂಬ ಹೊಸ ನಮೂನೆ ಕಾರ್ ತಂದು ಪ್ರಸಿದ್ಧನಾದ. ಕಾರಿನ ಮಾರಾಟ ತಾನು ನಿಗದಿ ಮಾಡಿದುದಕ್ಕಿಂತ ಹೆಚ್ಚಾದಾಗ 40ರಿಂದ 50 ಡಾಲರುಗಳ ವರೆಗೆ ಒಂದೊಂದು ಕಾರಿಗೂ ಸೋಡಿ ನೀಡಿದ. ಇದರಿಂದ ಕಾರಿನ ಉತ್ಪಾದನೆಯೂ ಹೆಚ್ಚಿತು, ಮಾರಾಟವೂ ಹೆಚ್ಚಿತು.

	ಎಷ್ಟೇ ದೊಡ್ಡ ಉದ್ಯಮಪತಿಯಾಗಿದ್ದರೂ ಫೋರ್ಡ್ ತನ್ನ ಸ್ನೇಹಿತರ ಗಡಿಯಾರ ಬಿಚ್ಚಿ ಜೋಡಿಸುವುದು, ರಿಪೇರಿ ಮಾಡುವುದು, ತನ್ನ ಕಾರ್ಖಾನೆಯಲ್ಲಿ ಯಂತ್ರಗಳನ್ನು ಬಿಚ್ಚಿ ದುರಸ್ತು ಮಾಡುವುದು ಮುಂತಾದ ಕೆಲಸಗಳಲ್ಲಿ ಸಂತೋಷ ಕಾಣುತ್ತಿದ್ದ. ದಾನ ಧರ್ಮಕ್ಕಿಂತ ಜನರಿಗೆ ಕೆಲಸ ಒದಗಿಸಿಕೊಡುವುದು ಮೇಲೆಂದು ಬಗೆದು ಫೋರ್ಡ್ ಆ ಕಾರ್ಯದಲ್ಲಿ ಉದ್ಯುಕ್ತನಾದ. ಡೆಟ್ರಾಯಿಟಿನಲ್ಲಿ ಒಂದು ಶಾಲೆಯನ್ನು ಬಡಮಕ್ಕಳಿಗಾಗಿ ಪ್ರಾರಂಭಿಸಿದ. ಉಪಯುಕ್ತ ವಸ್ತುಗಳನ್ನು ತಯಾರಿಸಿ ಹಣ ಸಂಪಾದನೆ ಮಾಡಿಕೊಳ್ಳುವ ಅವಕಾಶವನ್ನು ಅಲ್ಲಿ ಅವರಿಗೆ ಒದಗಿಸಿದ. ಹೆನ್ರಿ ಫೋರ್ಡ್ ಮೋಟರ್ ಕಂಪನಿಯ ಅಧ್ಯಕ್ಷನಾಗಿ ನಿವೃತ್ತನಾದಾಗ (1945), ಆ ಮೊದಲೇ ಈತನ ಒಬ್ಬನೇ ಮಗ ತೀರಿಹೋಗಿದ್ದುದರಿಂದ ಮೊಮ್ಮಗ ಎಡನೆಯ ಹೆನ್ರಿ ಫೋರ್ಡ್ ಆ ಪದವಿಗೆ ಬಂದ.

	ಆಹಾರ, ಪಥ್ಯ, ಓಡುವ ಪಂದ್ಯ, ಜಾನಪದ ನೃತ್ಯ, ಲೋಕೋಪಕಾರ, ಹಾಸ್ಯ ಇವೆಲ್ಲ ಫೋರ್ಡ್‍ನಿಗೆ ಬಹಳ ಇಷ್ಟವಾಗಿದ್ದುವು. ಆದರೆ ಯಹೂದ್ಯರ ವಿರೋಧವಾಗಿ ಲೇಖಗಳನ್ನು ಬರೆಯುತ್ತಿದ್ದ ಪತ್ರಿಕೆಗಳಿಗೆ ಸಹಾಯ ಮಾಡಿದ. ಮೊದಲ ಮತ್ತು ಎಡನೆಯ ಮಹಾಯುದ್ಧಗಳಲ್ಲಿ ಈತನ ಕಾರ್ಖಾನೆಯಲ್ಲಿ ಯುದ್ಧಕ್ಕೆ ಬೇಕಾದ ಪದಾರ್ಥಗಳನ್ನು ತಯಾರಿಸುವುದರಲ್ಲಿ ಅಗ್ರಗಣ್ಯನಾದ. ತನ್ನ ಮತ್ತು ತನ್ನ ಮಗನಿಗೆ ಸೇರಿದ ಹೆಚ್ಚು ಭಾಗ ಹಣವನ್ನು ಫೋರ್ಡ್ ಪ್ರತಿಷ್ಠಾನ ಎಂಬ ಸಂಸ್ಥೆ ಸ್ಥಾಪಿಸಿ ವಿದ್ಯಾಭ್ಯಾಸಕ್ಕೆ ಉಪಯೋಗವಾಗುವಂತೆ ಹಲವು ಯೋಜನೆಗಳನ್ನು ಪ್ರವರ್ತಿಸಿದ್ದಾನೆ. ಈ ಸಂಸ್ಥೆ 1948ರಲ್ಲಿ ಪಶ್ಚಿಮ ಜರ್ಮನಿಯಲ್ಲಿ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿತು. 1947 ಏಪ್ರಿಲ್ 7ರಲ್ಲಿ 84ನೆಯ ವಯಸ್ಸಿನಲ್ಲಿ ಹೆನ್ರಿ ಫೋರ್ಡ್ ಮಡಿದ.
(ಎಚ್.ಎಸ್‍ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ